ದುರ್ದಮ -
	ಈ ಹೆಸರಿನ ವ್ಯಕ್ತಿಗಳು ಇಬ್ಬರಿದ್ದಾರೆ. ಸ್ಕಾಂದ ಮಹಾಪುರಾಣದ ಬ್ರಹ್ಮಖಂಡದ ನಾಲ್ಕನೆಯ ಅಧ್ಯಾಯದಲ್ಲಿರುವ ಉಪಾಖ್ಯಾನದ ದುರ್ದಮ ಒಬ್ಬ ಗಂಧರ್ವ. ವಿಶ್ವಾವಸುವಿನ ಮಗ. 

ಹಾಲಾಸ್ಯನಾಥತೀರ್ಥವೆಂಬ ಸರೋವರದಲ್ಲಿ ಒಮ್ಮೆ ಈತ ನಗ್ನನಾಗಿ, ವಿವಸ್ತ್ರರಾದ ತನ್ನ ಸ್ತ್ರೀಯರೊಡನೆ ಕ್ರೀಡಿಸುತ್ತಿರುವಾಗ ವಸಿಷ್ಠ ಮುನಿ ಋಷಿಗಳೊಡನೆ ಮಾಧ್ಯಹ್ನಿಕಕ್ಕಾಗಿ ಅಲ್ಲಿಗೆ ಬರುತ್ತಾರೆ. ಹೆಂಗಸರು ಭಯದಿಂದ ತಕ್ಷಣವೇ ವಸ್ತ್ರಗಳನ್ನು ಧರಿಸುತ್ತಾರೆ. ದುರ್ದಮ ಮಾತ್ರ ನಗ್ನನಾಗಿಯೇ ಇರುತ್ತಾನೆ. ಕುಪಿತರಾದ ವಸಿಷ್ಠರು ನಿರ್ಲಜ್ಜನಾದ ಈತನನ್ನು ರಾಕ್ಷಸತ್ವ ಹೊಂದುವಂತೆ ಶಪಿಸುತ್ತಾರೆ. ಗಂಧರ್ವ ಸ್ತ್ರೀಯರು ತಮ್ಮ ಪತಿಯನ್ನು ಅನುಗ್ರಹಿಸುವಂತೆ ಬೇಡಿಕೊಳ್ಳುತ್ತಾರೆ. 16 ವರ್ಷದ ಅನಂತರ ವಿಷ್ಣುಧ್ಯಾನಪರನಾಗಿರುವ ಗಾಲವ ಮುನಿಯನ್ನು ಈತ ತಿನ್ನಲು ಹೋಗುತ್ತಾನೆ. ಆಗ ಮುನಿಯ ರಕ್ಷೆಗೆಂದು ವಿಷ್ಣು ಕಳುಹಿಸಿದ ಚಕ್ರ ಈತನ ಶಿರವನ್ನು ಕತ್ತರಿಸುತ್ತದೆ. ಆಗ ಈತನ ಶಾಪ ವಿಮೋಚನೆಯಾಗುತ್ತದೆ - ಎಂದು ಅವರು ತಿಳಿಸುತ್ತಾರೆ. ಅದರಂತೆ ದುರ್ದಮ ವಿಷ್ಣುಚಕ್ರದಿಂದ ಹತನಾಗಿ ಪುನಃ ಗಂಧರ್ವನಾಗುತ್ತಾನೆ.

	ಮಾರ್ಕಂಡೇಯ ಪುರಾಣದ 72 ನೆಯ ಅಧ್ಯಾಯದಲ್ಲಿ ಒಬ್ಬ ದುರ್ದಮನ ಉಲ್ಲೇಖವಿದೆ. ಈತ ಪ್ರಿಯವ್ರತ ರಾಜನ ವಂಶದವ. ತಂದೆ ವಿಕ್ರಮಶೀಲ. ತಾಯಿ ಕಾಳಿಂದಿ. ಒಮ್ಮೆ, ಬೇಟೆಯಾಡುತ್ತ ಪ್ರಮುಚನೆಂಬ ಮುನಿಯ ಆಶ್ರಮವನ್ನು ಪ್ರವೇಶಿಸುತ್ತಾನೆ. ಅಲ್ಲಿ ಮುನಿಯಿರುವುದಿಲ್ಲ. ಆತನ ಸಾಕುಮಗಳಾದ ರೇವತಿಯನ್ನು ಪ್ರಿಯೆ ಎಂದು ಸಂಬೋಧಿಸಿ ಮುನಿ ಎಲ್ಲಿ ಹೋಗಿರುವನು ಎಂದು ಪ್ರಶ್ನಿಸುತ್ತಾನೆ. ಅಗ್ನಿಶಾಲೆಯಲ್ಲಿದ್ದ ಮುನಿ ತನ್ನ ಸಾಕುಮಗಳಿಗೆ ದುರ್ದಮನೆಂಬ ಅರಸ ಪತಿಯಾಗುತ್ತಾನೆ ಎಂದು ಅಗ್ನಿದೇವನಿಂದ ಆಗತಾನೆ ತಿಳಿದುಕೊಂಡಿರುತ್ತಾನೆ. ಹೀಗಾಗಿ ದುರ್ದಮ ರೇವತಿಯರು ಮದುವೆಯಾಗುತ್ತಾರೆ. ವಿವಾಹಾಂಗವಾಗಿ ಏನು ಉಡುಗೊರೆಯನ್ನು ಕೊಡಲಿ ಎಂದು ಮುನಿ ಪ್ರಶ್ನಿಸುತ್ತಾನೆ. ದುರ್ದಮ ಮನ್ವಂತರಕ್ಕೆ ಅಧಿಪತಿಯಾಗುವಂಥ ಪುತ್ರನನ್ನು ಕೊಡಬೇಕೆಂದು ಪ್ರಾರ್ಥಿಸುತ್ತಾನೆ. ಪ್ರಮುಚ ಹಾಗೇ ಅನುಗ್ರಹಿಸುತ್ತಾನೆ. ಮುಂದೆ ದುರ್ದಮನ ಪುತ್ರ ರೈವತ ಮನುವಾಗುತ್ತಾನೆ.

(ಕೆ.ಆರ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ